ನೆಪೋಲಿಯನ್ನನ ಯುದ್ಧಗಳು-
	ನೆಪೋಲಿಯನ್ ಬೋನಪಾರ್ಟ್ ಯೂರೋಪಿನ ಇತಿಹಾಸದ ಅಪ್ರತಿಮ ವೀರ. ಮಹಾ ದಿಗ್ವಿಜಯಿ ಮತ್ತು ದಕ್ಷ ಆಡಳಿತಗಾರ. ನೆಪೊಲಿಯ್ನನ ಜೀವನವನ್ನು ಕುರಿತು ಪ್ರತ್ಯೇಕ ಲೇಖನ ಪ್ರಕಟವಾಗಿದೆ (ನೋಡಿ- ನೆಪೋಲಿಯನ್-1). ಇಲ್ಲಿ ಅವನು ಯೂರೋಪಿನಲ್ಲಿ ನಡೆಸಿದ ಯುದ್ಧಗಳನ್ನು ಕುರಿತ ವಿವರಗಳನ್ನು ನೀಡಲಾಗಿದೆ. ಯುದ್ಧ ನೈಪುಣ್ಯದ ಫಲವಾಗಿ ನೆಪೋಲಿಯನ್ ಇಪ್ಪತ್ತೇಳನೆಯ ವಯಸ್ಸಿನಲ್ಲೇ ಆಸ್ಟ್ರಿಯದ ವಿರುದ್ಧ ಕಾದಾಡುತ್ತಿದ್ದ ಫ್ರೆಂಚ್ ಸೈನ್ಯಕ್ಕೆ ದಂಡನಾಯಕನಾದ. 1793ರಲ್ಲಿ ಟೂಲಾನ್ ಬಂದರಿನ ಮುತ್ತಿಗೆಯಲ್ಲಿ ಭಾಗವಹಿಸಿ ನೆಪೋಲಿಯನ್ ತನ್ನ ಶಕ್ತಿಗಳನ್ನು ಪ್ರದರ್ಶಿಸಿ ನಗರದೊಳಕ್ಕೆ ನುಗ್ಗಿಬಂದ ಇಂಗ್ಲಿಷ್ ಸೈನ್ಯವನ್ನು ಹೊಡೆದೋಡಿಸಿ, ನೂತನ ಗಣರಾಜ್ಯಕ್ಕೆ ಅದನ್ನು ದಕ್ಕಿಸಿಕೊಟ್ಟು, ಸೈನಿಕ ಕ್ಷೇತ್ರದಲ್ಲಿ ಕೀರ್ತಿ ಸ್ಥಾಪಿಸಿದ. 1795ರಲ್ಲಿ ಪ್ಯಾರಿಸ್ ನಗರದ ರಾಜಪ್ರಭುತ್ವವಾದಿ ಪಿತೂರಿಗಾರರು ರಾಷ್ಟ್ರೀಯ ಸಮಿತಿಯ ಮೇಲೆ ದಾಳಿ ನಡೆಸಿದಾಗ ನೆಪೋಲಿಯನ್ ಕೆಲವೇ ಸೈನಿಕರ ಸಹಾಯದಿಂದ ಪ್ರತಿಗಾಮಿಗಳನ್ನು ಧೈರ್ಯದಿಂದ ಎದುರಿಸಿ ಡೈರೆಕ್ಟರಿ ಸರ್ಕಾರವನ್ನು ರಕ್ಷಿಸಿದ. ಇದರಿಂದ ಸುಪ್ರೀತಗೊಂಡ ಡೈರೆಕ್ಟರಿ ಸರ್ಕಾರ ನೆಪೋಲಿಯನ್ನನನ್ನು ಇಟಲಿಯಲ್ಲಿದ್ದ ಫ್ರೆಂಚ್ ಸೈನ್ಯಕ್ಕೆ ದಂಡನಾಯಕನನ್ನಾಗಿ ನೇಮಿಸಿ 1796ರಲ್ಲಿ ಇಟಲಿಯ ದಂಡಯಾತ್ರೆಯ ಕಾರ್ಯವನ್ನು ಅವನಿಗೆ ವಹಿಸಿತು.

    ಇಟಲಿಯ ದಂಡಯಾತ್ರೆ : 1796-1797. ಒಳಗಿನ ಶತ್ರುಗಳನ್ನು ಅಡಗಿಸುವುದರಲ್ಲಿ ಡೈರೆಕ್ಟರಿ ಸರ್ಕಾರ ಯಶಸ್ಸು ಗಳಿಸಿದ್ದರೂ ಇಂಗ್ಲೆಂಡ್ ಮತ್ತು ಆಸ್ಟ್ರಿಯಗಳ ಕಾಟ ಮಾತ್ರ ತಪ್ಪಲಿಲ್ಲ. ಆಸ್ಟ್ರಿಯವನ್ನು ಸೋಲಿಸಿದ ಹೊರತು ತಾನು ಗಳಿಸಿದ ವಿಜಯ ಊರ್ಜಿತವಾಗಲಾರದೆಂದು ಡೈರೆಕ್ಟರಿ ಭಾವಿಸಿ, ಆಸ್ಟ್ರಿಯದ ಮೇಲೆ ದಾಳಿ ಮಾಡಲು ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡು, ಮಾರೋ ಮತ್ತು ಷೂರ್ಡಾನರ ನಾಯಕತ್ವದಲ್ಲಿ ಎರಡು ಸೈನ್ಯಗಳು ಆಸ್ಟ್ರಿಯದ ರಾಜಧಾನಿಯಾದ ವಿಯೆನ್ನವನ್ನೂ ಮೂರನೆಯ ಸೈನ್ಯ ನೆಪೋಲಿಯನ್ನನ ನಿರ್ದೇಶನದಲ್ಲಿ ಆಸ್ಟ್ರಿಯನ್ ಪ್ರದೇಶವನ್ನೂ ಆಕ್ರಮಿಸುವಂತೆ ಸೂಚನೆ ನೀಡಿತು. ನೆಪೋಲಿಯನ್ ಇಟಲಿಯ ಮೇಲೆ ಕೈಗೊಂಡ ದಂಡಯಾತ್ರೆ ಅವನ ಏಳಿಗೆಯಲ್ಲಿ ಮಹತ್ತ್ವದ ಘಟನೆಯಾಗಿತ್ತು. 1796-1797ರ ಅವಧಿಯಲ್ಲಿ, ಎಂದರೆ ಸುಮಾರು ಒಂದು ವರ್ಷ ಕಾಲ ಮುಂದುವರಿದ ಈ ದಂಡಯಾತ್ರೆಯಿಂದ ನೆಪೋಲಿಯನ್ನನಲ್ಲಿ ಹುದುಗಿದ್ದ ಧೈರ್ಯ, ಸ್ಥೈರ್ಯ, ಸಾಹಸ ಮತ್ತು ಕೌಶಲಗಳು ಪ್ರಪಂಚಕ್ಕೆ ಪರಿಚಯವಾದವು. ಅವನ ಸಮರ ನೀತಿ ಆಸ್ಟ್ರಿಯನ್ ಜನತೆಯನ್ನಲ್ಲದೆ ಇಡೀ ಯೂರೋಪಿನ ಜನತೆಯನ್ನೆ ದಂಗು ಬಡಿಸಿತು. ನೆಪೋಲಿಯನ್ ಆಲ್ಪ್ಸ್ ಪರ್ವತಗಳನ್ನು ದಾಟಿ ಇಟಲಿಯನ್ನು ಪ್ರವೇಶಿಸಿ ಆಸ್ಟ್ರಿಯದ ಮಿತ್ರರಾಜ್ಯವಾದ ಸಾರ್ಡಿನಿಯದ ಸೈನ್ಯವನ್ನು 1796ರಲ್ಲಿ ಮಾಂಡೋವೀ ಕದನದಲ್ಲಿ ಸೋಲಿಸಿ ಸಂಧಿ ಮಾಡಿಕೊಂಡ. ತತ್ಪರಿಣಾಮವಾಗಿ ನೀಸ್ ಮತ್ತು ಸವಾಯ್ ಪಟ್ಟಣಗಳು ಫ್ರೆಂಚರ ವಶವಾದುವು. ಅದೇ ವರ್ಷ ಅವನು ಆಸ್ಟ್ರಿಯನರನ್ನು ಲಾಡೀ ಎಂಬ ಸ್ಥಳದಲ್ಲಿ ಸೋಲಿಸಿದ; ಮತ್ತು ಆಸ್ಟ್ರಿಯನರ ಬಹಳ ಮುಖ್ಯ ಕೋಟೆಯಾದ ಮಾಂಟವಕ್ಕೆ ಮುತ್ತಿಗೆ ಹಾಕಿ ಅದನ್ನು ಸ್ವಾಧೀನಪಡಿಸಿಕೊಂಡ. ಆಸ್ಟ್ರಿಯನರ ಮತ್ತೊಂದು ಸೈನ್ಯ ರೀವೊಲಿ ಎಂಬ ಕದನದಲ್ಲಿ ಸೋತಿತು. ಎಲ್ಲ ಕದನಗಳಲ್ಲೂ ವಿಜಯಪತಾಕೆಯನ್ನು ಹಾರಿಸಿದ ನೆಪೋಲಿಯನ್ ವಿಯೆನ್ನಾಭಿಮುಖವಾಗಿ ಹೊರಟ. ಶತ್ರುಸೈನ್ಯಗಳಿಂದ ಸುತ್ತುವರಿಯಲ್ಪಟ್ಟ ಆಸ್ಟ್ರಿಯ ತನ್ನ ಸೋಲು ಖಚಿತವೆಂದು ಭಾವಿಸಿ ಫ್ರಾನ್ಸಿನೊಡನೆ ಸಂಧಾನ ಮಾಡಿಕೊಳ್ಳಲು ನಿರ್ಧರಿಸಿತು. ಕ್ಯಾಂಪೊಫಾರ್ಮಿಯೊ ಎಂಬ ಕರಾರಿಗೆ ಸಹಿ ಹಾಕಿ ಫ್ರಾನ್ಸಿನೊಡನೆ ಶಾಂತಿಸಂಧಾನ ಮಾಡಿಕೊಂಡಿತು. ತತ್ಪರಿಣಾಮವಾಗಿ ಬೆಲ್ಜಿಯಂನ ಪ್ರದೇಶಗಳು ಫ್ರಾನ್ಸಿನ ವಶವಾದವು. ಉತ್ತರ ಇಟಲಿಯಲ್ಲಿ ನೆಪೋಲಿಯನ್ ನಿರ್ಮಿಸಿದ ಗಣರಾಜ್ಯವನ್ನು ಆಸ್ಟ್ರಿಯ ಒಪ್ಪಿಕೊಂಡಿತು. ಐಯೋನಿಯನ್ ದ್ವೀಪಸ್ತೋಮ ಫ್ರೆಂಚರ ಅಧೀನಕ್ಕೆ ಒಳಪಟ್ಟಿತು. ವೆನಿಸ್ ಪಟ್ಟಣವನ್ನಲ್ಲದೆ ಏಡ್ರಿಯಾಟಿಕ್ ಪ್ರದೇಶಗಳೆಲ್ಲವನ್ನೂ ಆಸ್ಟ್ರಿಯ ಹಾಗೆಯೇ ಇಟ್ಟುಕೊಳ್ಳಬಹುದೆಂದು ನಿರ್ಣಯಿಸಲಾಯಿತು. ಜರ್ಮನಿ ಮತ್ತು ಫ್ರಾನ್ಸ್ ಪ್ರತಿನಿಧಿಗಳು ಸೇರಿ ಜರ್ಮನಿಯ ವ್ಯವಹಾರವನ್ನು ಚರ್ಚಿಸುವುದೆಂದು ನಿರ್ಣಯಿಸಲಾಯಿತು. ರೈನ್ ನದಿಯ ಎಡಭಾಗದಲ್ಲಿದ್ದ ಕೆಲವು ಪ್ರದೇಶಗಳನ್ನು ಬಿಟ್ಟುಕೊಡುವುದಾಗಿ ಆಸ್ಟ್ರಿಯ ಒಪ್ಪಿಕೊಂಡಿತು. ನೆಪೋಲಿಯನ್ನನ ರಾಜಕೀಯ ಕುಶಲತೆಗೆ ಈ ಕರಾರು ಒಂದು ಉತ್ತಮ ನಿದರ್ಶನವಾಗಿತ್ತು. ನೆಪೋಲಿಯನ್ನನ ಈ ವಿಜಯದಿಂದ, ಕ್ರಾಂತಿಯ ಕಾಲದಲ್ಲಿ ಫ್ರಾನ್ಸಿನ ವಿರುದ್ದ ಆಸ್ಟ್ರಿಯ, ಪ್ರಷ್ಯ ಮತ್ತು ಇಂಗ್ಲೆಂಡ್ ಮಾಡಿಕೊಂಡಿದ್ದ ಮೊದಲ ಒಕ್ಕೂಟ ಒಡೆದುಹೋಯಿತು. ಆದಾಗ್ಯೂ ಇಂಗ್ಲೆಂಡ್ ಏಕಾಂಗಿಯಾಗಿ ಫ್ರಾನ್ಸಿನ ವಿರುದ್ಧ ಯುದ್ಧ ಮುಂದುವರಿಸಿತು.

  
ಈಜಿಪ್ಟಿನ ದಂಡಯಾತ್ರೆ : ನೆಪೋಲಿಯನ್ ಪ್ಯಾರಿಸಿಗೆ ಹಿಂದಿರುಗಿದಾಗ ಅವನಿಗೆ ಹಾರ್ದಿಕ ಸ್ವಾಗತ ದೊರೆಯಿತು. ಕ್ರಾಂತಿಕಾರಿ ಫ್ರಾನ್ಸಿನ ಹಿತಾಸಕ್ತಿಗಳನ್ನು ರಕ್ಷಿಸುವುದಕ್ಕಾಗಿ ಇಂಗ್ಲೆಂಡಿನ ಪ್ರಾಬಲ್ಯವನ್ನು ಕುಗ್ಗಿಸುವುದು ಅವಶ್ಯಕವಾಗಿತ್ತು. ಆದ್ದರಿಂದ ನೆಪೋಲಿಯನ್ ಇಂಗ್ಲೆಂಡಿನ ಮೇಲೆ ಯುದ್ಧಕ್ಕೆ ಹೋಗುವಂತೆ ಡೈರೆಕ್ಟರಿ ಸರ್ಕಾರ ಇಚ್ಛಿಸಿತು. ಇಂಗ್ಲೆಂಡಿನ ಮೇಲೆ ನೇರವಾಗಿ ಯುದ್ಧಮಾಡುವುದು ಮೂರ್ಖತನವೆಂದು ನೆಪೋಲಿಯನ್ ಭಾವಿಸಿದ. ಪೌರಸ್ತ್ಯ ದೇಶಗಳೊಡನೆ ಯೂರೋಪಿನ ವ್ಯಾಪಾರ ಈಜಿಪ್ಟಿನ ಮೂಲಕ ನಡೆಯುತ್ತಿದ್ದದುದರಿಂದ ಆ ದೇಶವನ್ನು ಹಿಡಿದುಕೊಂಡರೆ ಇಂಗ್ಲೆಂಡಿನ ವ್ಯಾಪಾರಕ್ಕೆ ಭಾರಿ ಪೆಟ್ಟು ಬೀಳುವುದೆಂದೂ ಆ ಮೂಲಕ ಇಂಗ್ಲೆಂಡಿನ ಸೊಕ್ಕನ್ನು ಮುರಿಯಬಹುದೆಂದೂ ಡೈರೆಕ್ಟರಿಯ ಸದಸ್ಯರಿಗೆ ಸಲಹೆ ಮಾಡಿದ. ಅವನ ಸಲಹೆಗಳನ್ನು ಅವರು ಸಂಪೂರ್ಣವಾಗಿ ಅಂಗೀಕರಿಸಿ ಈಜಿಪ್ಟಿನ ದಂಡಯಾತ್ರೆಗೆ ಸಕಲ ಸಿದ್ಧತೆಗಳನ್ನು ಒದಗಿಸಿಕೊಟ್ಟರು. ಇಂಗ್ಲೆಂಡಿನ ಪ್ರಾಬಲ್ಯವನ್ನು ಮುರಿಯುವ ಮತ್ತು ಫ್ರಾನ್ಸಿನ ಚಕ್ರಾಧಿಪತ್ಯವನ್ನು ವಿಸ್ತರಿಸುವ ಉದ್ದೇಶದಿಂದ, ಅಸಂಖ್ಯಾತ ಸೈನಿಕರೊಡಗೂಡಿ, ಮೆಡಿಟರೇನಿಯನ್ ಸಮುದ್ರದ ಮಾರ್ಗವಾಗಿ, ಇಂಗ್ಲಿಷ್ ನೌಕಾಪಡೆಗೆ ಗೋಚರಿಸದಂತೆ ಜುಲೈ 10ರಂದು ನೆಪೋಲಿಯನ್ ಈಜಿಪ್ಟನ್ನು ತಲುಪಿದ. ಈಜಿಪ್ಟನ್ನು ತಲುಪುವ ಮುನ್ನ ಮಾರ್ಗ ಮಧ್ಯದಲ್ಲಿ ಮಾಲ್ಟ ದ್ವೀಪವನ್ನು ವಶಪಡಿಸಿಕೊಂಡ. ಅವನಿಗೆ ಪಿರಮಿಡ್ಡುಗಳು ಗೋಚರಿಸುತ್ತಿದ್ದಂತೆಯೇ ಅನೇಕ ಸ್ಥಳೀಯ ರಾಜರು ತಮ್ಮ ಅಶ್ವಸೇನೆಯೊಡನೆ ನೆಪೋಲಿಯನ್ನನನ್ನು ಎದುರಿಸಿದರು. ಅವರನ್ನು ಅವನು ಪಿರಮಿಡ್ ಯುದ್ಧದಲ್ಲಿ ಸೋಲಿಸಿ ಜಯ ಗಳಿಸಿದ. ಅವನು ಕೈರೋಗೆ ಹೋಗಲು ಈ ಯುದ್ಧ ತೆರವು ಮಾಡಿಕೊಟ್ಟಿತು. ಅಷ್ಟರಲ್ಲಿ ಬ್ರಿಟಿಷ್ ನೌಕಾದಳಪತಿ ನೆಲ್ಸನ್ ಫ್ರೆಂಚ್ ನೌಕಾ ಪಡೆಯನ್ನು ನೈಲ್ ನದಿಯ ಕದನದಲ್ಲಿ (1798) ಸೋಲಿಸಿದ. ಇದರ ಪರಿಣಾಮವಾಗಿ ನೆಪೋಲಿಯನ್ ಫ್ರಾನ್ಸಿನೊಡನೆ ಹೊಂದಿದ್ದ ಸಂಪರ್ಕ ಕಡಿದುಬಿತ್ತು ಮತ್ತು ಶಸ್ತ್ರಾಸ್ತ್ರಗಳ ಸರಬರಾಜು ನಿಂತಿತು. ಸಂದಿಗ್ಧಪರಿಸ್ಥಿತಿಯನ್ನು ಅರಿತ ನೆಪೋಲಿಯನ್ ಏಷ್ಯ ಮೈನರ್ ಮೂಲಕ ಯೂರೋಪಿಗೆ ಹಿಂದಿರುಗಲು ಯತ್ನಿಸಿದ. ಆದರೆ ತುರ್ಕರು ಇಂಗ್ಲಿಷರು ಜೊತೆಗೂಡಿ ತನ್ನ ಮೇಲೆ ಯುದ್ಧ ಘೋಷಿಸಿದ್ದರಿಂದ, ಅವರನ್ನು ಸೋಲಿಸಲು ತುರ್ಕಿಯ ಪ್ರಾಂತ್ಯವಾದ ಸಿರಿಯದ ಮೇಲೆ ಜನವರಿ 1799ರಲ್ಲಿ ಯುದ್ಧ ಘೋಷಿಸಿದ. ಯುದ್ಧ ಭೀಕರವಾಗಿತ್ತು. ಅವನು ಗಾಜಾ ಮತ್ತು ಜಾಫ್ ಕೋಟೆಗಳನ್ನು ವಶಪಡಿಸಿಕೊಂಡು ಆಕ್ರೀಗೆ ಮುತ್ತಿಗೆ ಹಾಕಿದ. ಆದರೆ ಇಂಗ್ಲಿಷ್ ನೌಕಾಪಡೆಯ ನೆರವು ಇದ್ದುದರಿಂದ ಈ ಮುತ್ತಿಗೆ ಯಶಸ್ವಿಯಾಗಲಿಲ್ಲ. ಅವನು ಸೋತು ಹಿಮ್ಮೆಟ್ಟಬೇಕಾಯಿತು. ಪ್ಲೇಗ್ ರೋಗದ ಪರಿಣಾಮವಾಗಿ ನೆಪೋಲಿಯನ್ನನ ಸೈನ್ಯ ಕರಗಿತು. ಭಗ್ನ ಹೃದಯಿಯಾಗಿ ನೆಪೋಲಿಯನ್ ಕೈರೋಗೆ ಮರಳಿದ. ಈ ಯುದ್ಧದಿಂದ ಸುಮಾರು 5,000 ಸೈನಿಕರು ನಷ್ಟವಾದರು. ಆದರೂ ದೃತಿಗೆಡದೆ, ಕೆಲವು ವಾರಗಳ ಅನಂತರ ಆಬೂಕಿರ್ ಕದನದಲ್ಲಿ (ಜುಲೈ 25,1970) ತುರ್ಕಿಯ ಸೈನ್ಯದ ಮೇಲೆ ಅಂತಿಮ ಜಯ ಗಳಿಸಿದ. ಈ ಮಧ್ಯೆ ಫ್ರಾನ್ಸಿನ ಡೈರೆಕ್ಟರಿ ಸರ್ಕಾರ ದುರವಸ್ಥೆಗೀಡಾಗಿದೆಯೆಂಬ ಸುದ್ದಿ ಅವನಿಗೆ ತಲುಪಿತು. ದ್ವಿತೀಯ ಒಕ್ಕೂಟ ಫ್ರಾನ್ಸಿನ ವಿರುದ್ಧ ನಿರ್ಮಾಣವಾಗಿದೆಯೆಂದೂ, ಫ್ರೆಂಚ್ ಸೈನ್ಯ ಎಲ್ಲ ಕಡೆ ಸೋಲನ್ನು ಅನುಭವಿಸುತ್ತಿರುವುದೆಂದೂ ಅವನಿಗೆ ತಿಳಿಯಿತು. ತನಗೋಸ್ಕರ ಮತ್ತು ಫ್ರಾನ್ಸಿಗೋಸ್ಕರ ಈಜಿಪ್ಟನ್ನು ಬಿಡುವುದು ಅತ್ಯುತ್ತಮವೆಂದು ಬಗೆದು ಆಗಸ್ಟ್ 23ರಂದು ಅವನು ಅಲೆಗ್ಸಾಂಡ್ರಿಯವನ್ನು ಬಿಟ್ಟು, ಶತ್ರುಗಳ ಕೈಗೆ ಸಿಗದೆ ಅಕ್ಟೋಬರ್ 1799ರಲ್ಲಿ ಫ್ರಾನ್ಸ್‍ನನ್ನು ತಲುಪಿದ.

	ನೆಪೋಲಿಯನ್ ಈಜಿಪ್ಟಿನಿಂದ ಹಿಂದಿರುಗಿ ಬರುವ ವೇಳೆಗೆ ಫ್ರಾನ್ಸಿನ ರಾಜಕೀಯ ತುಂಬ ಹದಗೆಟ್ಟಿತ್ತು. ಡೈರೆಕ್ಟರಿ ಸರ್ಕಾರ ಸ್ವದೇಶ ಮತ್ತು ವಿದೇಶ ನೀತಿಗಳಲ್ಲಿ ವಿಫಲಗೊಂಡಿತ್ತು. ಇಂಗ್ಲೆಂಡ್, ಆಸ್ಟ್ರಿಯ ಮತ್ತು ರಷ್ಯಗಳು ಫ್ರಾನ್ಸಿನ ವಿರುದ್ಧ ಎರಡನೆಯ ಒಕ್ಕೂಟವನ್ನು ನಿರ್ಮಿಸಿಕೊಂಡಿದ್ದವು. ಫ್ರೆಂಚ್ ಸೈನ್ಯವನ್ನೂ ಇಟಲಿಯಿಂದಲೂ ಆಸ್ಟ್ರಿಯದಿಂದಲೂ ಓಡಿಸಿದ್ದರು. ನೆಪೋಲಿಯನ್ನನಿಂದ ಸ್ಥಾಪಿತವಾಗಿದ್ದ ಗಣರಾಜ್ಯಗಳು ಮುರಿದುಬಿದ್ದಿದ್ದುವು.
  

ಆಸ್ಟ್ರಿಯದೊಡನೆ ಯುದ್ಧ : 1800-01. ನೆಪೋಲಿಯನ್ 1799ರಲ್ಲಿ ಫ್ರಾನ್ಸಿನ ಅಧಿಕಾರವನ್ನು ವಹಿಸಿಕೊಂಡಮೇಲೆ ಆಸ್ಟ್ರಿಯವನ್ನು ಶಿಕ್ಷಿಸಲು ನಿರ್ಧರಿಸಿ ದಂಡಯಾತ್ರೆ ಕೈಗೊಂಡ. ಮಾರೋನ ನಾಯಕತ್ವದಲ್ಲಿ ಒಂದು ಸೈನ್ಯವನ್ನು ರೈನ್ ಮೂಲಕ ಆಸ್ಟ್ರಿಯವನ್ನು ಆಕ್ರಮಿಸಲು ಕಳುಹಿಸಿ ತಾನು ಸೇಂಟ್ ಬರ್ನಾಡ್ ಕಣಿವೆಯ ಮೂಲಕ ಇಟಲಿಗೆ ಹೋಗಿ ಯಾವ ವಿರೋಧವೂ ಇಲ್ಲವೆ ಮಿಲಾನ್ ಪಟ್ಟಣವನ್ನು ಪ್ರವೇಶಿಸಿದ. ಅನಂತರ ಆಸ್ಟ್ರಿಯನ್ ಸೈನ್ಯದ ಮುಖ್ಯನೆಲೆಯಾಗಿದ್ದ ಅಲೆಗ್ಸಾಂಡ್ರಿಯದ ಮೇಲೆ ದಾಳಿ ಮಾಡಿ 1800ರ ಜೂನ್ 14ರಂದು ಮರೆಂಗೋ ಕದನದಲ್ಲಿ ಆಸ್ಟ್ರಿಯನ್ ಸೈನ್ಯವನ್ನು ಸೋಲಿಸಿದ. ಇದರಿಂದ 1798-99ರ ಅವಧಿಯಲ್ಲಿ ಪ್ರಾನ್ಸ್ ಕಳೆದುಕೊಂಡಿದ್ದ ಎಲ್ಲ ಪ್ರದೇಶಗಳನ್ನೂ ಮತ್ತೆ ಪಡೆದಂತಾಯಿತು. ಮಾರೋನ ಸೈನ್ಯ ಹೋಯನ್ ಲಿಂಡನ್ ಕದನದಲ್ಲಿ ಆರ್ಚ್‍ಡ್ಯೂಕ್ ಜಾನನನ್ನು ಸೋಲಿಸಿತು. ಇದರಿಂದ ಆಸ್ಟ್ರಿಯದ ರಾಜಧಾನಿಯಾದ ವಿಯೆನ್ನಕ್ಕೆ ಅಪಾಯ ತಟ್ಟಿತು. ಫ್ರಾನ್ಸಿನ ಶತ್ರುವಾಗಿದ್ದ ಜಾರ್ ಅಷ್ಟರಲ್ಲಿ ನೆಪೋಲಿಯನ್ನನಿಗೆ ಮಿತ್ರನಾದ. ಸಂದಿಗ್ಧ ಪರಿಸ್ಥಿತಿಯನ್ನು ಅರಿತ ಆಸ್ಟ್ರಿಯದ 2ನೆಯ ಫ್ರಾನ್ಸಿಸ್ ನೆಪೋಲಿಯನ್ನನೊಡನೆ ಲೂನವಿಲ್‍ನಲ್ಲಿ 1801ರ ಫೆಬ್ರವರಿ 9ರಂದು ಕೌಲು ಮಾಡಿಕೊಂಡು ಯುದ್ಧವನ್ನು ಕೊನೆಗೊಳಿಸಿದ. ಈ ಒಪ್ಪಂದದಿಂದ ರೈನ್ ನದಿಯ ಎಡಭಾಗಕ್ಕಿದ್ದ ಎಲ್ಲ ಪ್ರದೇಶಗಳನ್ನೂ ಫ್ರಾನ್ಸಿಗೆ ವಹಿಸಿಕೊಡಲಾಯಿತು. ಅಲ್ಲದೆ ಕೆಲವು ಪ್ರಮುಖ ಪಟ್ಟಣಗಳು ಫ್ರಾನ್ಸಿಗೆ ದೊರೆತುವು.

ಅಮ್ಯಾನ್ ಶಾಂತಿ ಕೌಲು: 1802. ನೆಪೋಲಿಯನ್ನನಿಗೆ ಸವಾಲಿನಂತಿದ್ದ ರಾಷ್ಟ್ರವೆಂದರೆ ಇಂಗ್ಲೆಂಡ್. ನೇರವಾಗಿ ಅದನ್ನು ಆಕ್ರಮಣ ಮಾಡುವುದು ಶುದ್ಧ ಮೂರ್ಖತನವೆಂದು ಭಾವಿಸಿದ ನೆಪೋಲಿಯನ್ ಬೇರೆ ಮಾರ್ಗಗಳಿಂದ ಅದನ್ನು ನಾಶಮಾಡಲು ಇಚ್ಛಿಸಿದ. ಅಮೆರಿಕದ ಸ್ವಾತಂತ್ರ್ಯ ಸಮರದ ಕಾಲದಲ್ಲಿ ಇಂಗ್ಲೆಂಡ್ ಎಲ್ಲ ತಟಸ್ಥ ರಾಷ್ಟ್ರಗಳ ಹಡಗುಗಳನ್ನು ಶೋಧಿಸುವ ಹಕ್ಕನ್ನು ಪಡೆದುಕೊಂಡಿತ್ತು. ಬಾಲ್ಟಿಕ್ ಸಮುದ್ರದ ಅಂಚಿನಲ್ಲಿದ್ದ ಡೆನ್ಮಾರ್ಕ್, ಸ್ವೀಡನ್, ಪ್ರಷ್ಯ ಮತ್ತು ರಷ್ಯಗಳು ಇಂಗ್ಲೆಂಡಿನ ಏಕಸ್ವಾಮ್ಯ ಹಕ್ಕನ್ನು ವಿರೋಧಿಸಿ ಯುದ್ಧಸನ್ನದ್ದ ತಾಟಸ್ಥ್ಯ ಸಂಘವನ್ನು ಸ್ಥಾಪಿಸಿಕೊಂಡಿದ್ದವು. ಇದರಿಂದ ಬಲಿಷ್ಠನೌಕಾಪಡೆ ಬಾಲ್ಟಿಕ್ ಸಮುದ್ರದಲ್ಲಿ ನಿರ್ಮಾಣವಾಗುವುದೆಂದು ಇಂಗ್ಲಿಷರಿಗೆ ಖಚಿತವಾಯಿತು. ಆದ್ದರಿಂದ ಇಂಗ್ಲೆಂಡ್ ಯುದ್ಧವನ್ನು ಆರಂಭಿಸಿತು. ಅದು ಕೋಪನ್ ಹೇಗೆನ್ ಮೇಲೆ ದಾಳಿ ಮಾಡಿ, ಡೇನಿಷರ ಯುದ್ಧನೌಕೆಯನ್ನು ನಾಶಪಡಿಸಿ, ಅವರ ಒಕ್ಕೂಟವನ್ನು ಮುರಿಯಿತು. ಅದೇ ಕಾಲದಲ್ಲಿ, ನೆಪೋಲಿಯನ್ ಈಜಿಪ್ಟಿನಲ್ಲಿ ಬಿಟ್ಟುಹೋಗಿದ್ದ ಫ್ರೆಂಚ್ ಸೈನ್ಯವನ್ನು ಶರಣಾಗುವಂತೆ ನೆಲ್ಸನ್ ಬಲಾತ್ಕರಿಸಿದ. ಉಭಯ ರಾಷ್ಟ್ರಗಳ ನಡುವೆ ಯುದ್ಧ ಮುಂದುವರಿಯುವ ಚಿಹ್ನೆಗಳು ಕಂಡುಬಂದವು. ಆದರೆ ಎರಡೂ ರಾಷ್ಟ್ರಗಳು ಯುದ್ಧದಿಂದ ಬಹಳವಾಗಿ ಕಷ್ಟನಷ್ಟಗಳನ್ನು ಅನುಭವಿಸಿದ್ದುದರಿಂದ ಶಾಂತಿಗಾಗಿ ಹಾತೊರೆಯುತ್ತಿದ್ದವು. ಅದರಂತೆಯೇ 1802ರ ಮಾರ್ಚ್ 27ರಂದು ಆಮ್ಯಾನ್ ಕೌಲು ಏರ್ಪಟ್ಟಿತು. ಫ್ರಾನ್ಸಿನಿಂದ ಇಂಗ್ಲಿಷರು ಆಕ್ರಮಿಸಿಕೊಂಡಿದ್ದ ಪ್ರದೇಶಗಳೆಲ್ಲವನ್ನೂ ಬಿಟ್ಟುಕೊಟ್ಟರು. ಇಂಗ್ಲೆಂಡು ಡಚ್ಚರಿಂದ ತೆಗೆದುಕೊಂಡಿದ್ದ ಸಿಂಹಳವನ್ನೂ ಸ್ಪೇನಿನಿಂದ ವಶಪಡಿಸಿಕೊಂಡಿದ್ದ ಟ್ರಿನಿಡಾಡನ್ನೂ ತಾನೇ ಇಟ್ಟುಕೊಂಡಿತು. ಮಾಲ್ಟಾವನ್ನು ಸೇಂಟ್ ಜಾನನಿಗೆ ವಹಿಸಿಕೊಡಬೇಕೆಂದು ತೀರ್ಮಾನಿಸಲಾಯಿತು. ಆ ದ್ವೀಪದ ಸ್ವಾತಂತ್ರ್ಯವನ್ನು ಎಲ್ಲ ಅಗ್ರರಾಷ್ಟ್ರಗಳೂ ಮಾನ್ಯ ಮಾಡುವಂತೆ ಕೋರಲಾಯಿತು. ಯುದ್ಧ ಕೊನೆಗೊಂಡು ಉಭಯ ರಾಷ್ಟ್ರಗಳೂ ಶಾಂತಿಸೌಹಾರ್ದದಿಂದ ಬಾಳಲು ಅವಕಾಶವಾಯಿತೆಂದು ಅನೇಕರು ಭಾವಿಸಿದ್ದರು. ಆದರೆ ಅದು ಒಂದು ಭ್ರಮೆಯಾಯಿತು. ಅದು ಖಾಯಂ ಶಾಂತಿ ಒಪ್ಪಂದವಾಗಿರದೆ ತಾತ್ಕಾಲಿಕ ಒಪ್ಪಂದವಾಗಿ ಪರಿಣಮಿಸಿತು. ಫ್ರಾನ್ಸ್ ಇನ್ನೂ ಬೆಲ್ಜಿಯಂ ಮತ್ತು ಹಾಲೆಂಡುಗಳನ್ನು ತನ್ನ ಹತೋಟಿಯಲ್ಲಿಯೇ ಇಟ್ಟುಕೊಂಡಿತ್ತು. ಫ್ರಾನ್ಸಿನೊಂದಿಗೆ ವ್ಯಾಪಾರ ಸಂಬಂಧ ಏರ್ಪಡುವುದು ಒಂದು ಕನಸಾಗಿತ್ತು. ಆದರೂ ಆಮ್ಯಾನ್ ಶಾಂತಿ ಕೌಲು ಫ್ರಾನ್ಸ್ ಚೇತರಿಸಿಕೊಳ್ಳುವುದಕ್ಕೆ ಸ್ವಲ್ಪ ಅವಕಾಶ ಮಾಡಿಕೊಟ್ಟಿತು. ಅದೇ ಕಾಲದಲ್ಲಿ (1802-03) ನೆಪೋಲಿಯನ್ ಫ್ರಾನ್ಸಿನ ರಾಜಕೀಯ ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿದ. ಸೆನೆಟ್ ಸಭೆಯ ಅನುಮತಿ ಪಡೆದು ಡಿಸೆಂಬರ್ 1804ರಲ್ಲಿ ಫ್ರಾನ್ಸಿನ ಚಕ್ರವರ್ತಿಯಾದ.

	ಆಮ್ಯಾನ್ ಶಾಂತಿಹರಣ ಮತ್ತು ಮೂರನೆಯ ಮಿತ್ರರಾಷ್ಟ್ರ ಕೂಟ : ಫ್ರಾನ್ಸ್ ಅತಿಬೇಗ ಯೂರೋಪಿನ ರಾಜಕೀಯದಲ್ಲಿ ಪ್ರಾಮುಖ್ಯ ಪಡೆದಿದ್ದು ಅನೇಕ ರಾಷ್ಟ್ರಗಳಿಗೆ ಸರಿಹೋಗಿರಲಿಲ್ಲ. ಈ ಒಪ್ಪಂದದ ಅನಂತರ ಅದು ಗಳಿಸಿದ ಐಶ್ವರ್ಯ ಮತ್ತು ಪ್ರದೇಶಗಳು ಅನೇಕ ರಾಜಕಾರಣಿಗಳ ಕಣ್ಣುಗಳನ್ನು ಕುಕ್ಕಿಸಿದವು. ಅದು ಆರು ಗಣರಾಜ್ಯಗಳನ್ನು ಸ್ಥಾಪಿಸಿ ಅನೇಕ ರಾಜ್ಯಗಳ ಆಂತರಿಕ ರಾಜಕೀಯ ವ್ಯವಹಾರಗಳಲ್ಲಿ ಪ್ರವೇಶ ಮಾಡಲಾರಂಭಿಸಿತು. ಯೂರೋಪಿನಲ್ಲಿ ಅಧಿಕಾರ ಸಮತೋಲವನ್ನು ಕಾಪಾಡಿಕೊಂಡು ಬರುವುದರಲ್ಲಿ ಆಸಕ್ತಿಹೊಂದಿದ್ದ ಇಂಗ್ಲೆಂಡಿಗೂ ಆತಂಕ ಉಂಟಾಯಿತು. ಶಾಂತಿ ಕೌಲಿನ ಪರಿಣಾಮವಾಗಿ ತಾವು ಸುಲಭವಾಗಿ ಫ್ರಾನ್ಸಿನೊಡನೆ ಎಲ್ಲ ಭಾಗಗಳಲ್ಲೂ ವ್ಯಾಪಾರ ಮಾಡಬಹುದೆಂದು ಅವರು ಹೊಂದಿದ್ದ ನಂಬಿಕೆ ಹುಸಿಯಾಯಿತು. ಇಂಗ್ಲಿಷರನ್ನು ಫ್ರೆಂಚ್ ವ್ಯಾಪಾರ ಕೇಂದ್ರಗಳಿಂದ ಹೊರಹಾಕಲಾಯಿತು. ಮಾಲ್ಟ ದ್ವೀಪದ ಬಗ್ಗೆ ಎರಡು ರಾಷ್ಟ್ರಗಳೂ ಯುದ್ದಕ್ಕೆ ನಿಂತವು. ಆಮ್ಯಾನ್ ಶಾಂತಿ ಒಪ್ಪಂದದ ಕೆಲವು ಶರತ್ತುಗಳನ್ನು ಯಾರೂ ಪಾಲಿಸಲಿಲ್ಲ. ಸಂಪದ್ಭರಿತವಾದ ಪ್ರದೇಶವನ್ನು ಬಿಟ್ಟುಕೊಡಲು ಇಂಗ್ಲೆಂಡ್ ಒಪ್ಪಲಿಲ್ಲ. 1800ರಲ್ಲಿ ನಡೆದ ಮಾತುಕತೆ ಮುರಿದುಬಿತ್ತು.
 
  	ಆಮ್ಯಾನ್ ಶಾಂತಿ ಕೌಲು ಒಂದು ಸತ್ತ ಕಾಗದವೆಂದು ನೆಪೋಲಿಯನ್ ಘೋಷಿಸಿದ. ಅವನು ನೇಪಲ್ಸನ್ನು ಜೊತೆ ಮಾಡಿಕೊಂಡು ಹಾಲೆಂಡಿಗೆ ಸೈನ್ಯ ನುಗ್ಗಿಸಿ, ಹ್ಯಾನೋವರ್ ಪಟ್ಟಣದ ಮೇಲೆ ದಾಳಿ ಮಾಡಿ, ಇಂಗ್ಲಿಷರು ಮಾಲ್ಟವನ್ನು ಬಿಡುವುದಾದರೆ ತಾನು ಆ ಪ್ರದೇಶವನ್ನು ತೆರವು ಮಾಡುವುದಾಗಿ ಹೇಳಿದ. ರಷ್ಯದ 1ನೆಯ ಅಲೆಗ್ಸಾಂಡರ್ ನೆಪೋಲಿಯನ್ನಿನ ಮೈತ್ರಿಗೆ ಒಪ್ಪಲಿಲ್ಲ. ಪ್ರಷ್ಯ ಮೊದಲಿಂದಲೂ ಫ್ರಾನ್ಸಿನೊಡನೆ ಸ್ನೇಹಸಂಬಂಧವನ್ನು ಇಟ್ಟಿಕೊಂಡಿದ್ದರೂ ತಟಸ್ಥವಾಗಿತ್ತು. ಆದರೆ ಸ್ಪೇನಿನ ದೊರೆ 4ನೆಯ ಚಾಲ್ರ್ಸ್‍ನೊಡನೆ ನೆಪೋಲಿಯನ್ ಮ್ಯಾಡ್ರಿಡ್ ಕೌಲನ್ನು ಮಾಡಿಕೊಂಡ. ಇದರ ಪ್ರಕಾರ ಸ್ಪೇನ್ ದೊರೆ ಇಂಗ್ಲೆಂಡಿನ ಮಿತ್ರರಾಜ್ಯವಾದ ಪೋರ್ಚುಗಲ್ಲಿನ ಮೇಲೆ ದಾಳಿ ಮಾಡಬೇಕಾಗಿತ್ತು. ಆದರೆ ಆ ದಾಳಿ ನೆಪೋಲಿಯನ್ ಭಾವಿಸಿದ ರೀತಿಯಲ್ಲಿ ನಡೆಯಲಿಲ್ಲ. ಅಲ್ಲದೆ ಸ್ಪೇನ್ ಕಪ್ಪವನ್ನು ನೀಡುವಂತೆಯೂ ಬಲಾತ್ಕರಿಸಿದ. ಫ್ರಾನ್ಸಿನ ರಥದ ಗಾಲಿಯಾಗಿರುವುದಕ್ಕೆ ಸ್ಪೇನನ್ನು ಬಲವಂತವಾಗಿಯೇ ಎಳೆಯಲಾಯಿತು. ನೆಪೋಲಿಯನ್ನನ ಆಕ್ರಮಣಗಳು ಮತ್ತು ಆಕಾಂಕ್ಷೆಗಳು ಮೂರನೆಯ ಕೂಟದ ರಚನೆಗೆ ನಾಂದಿಯಾದವು.

  	ಇಂಗ್ಲೆಂಡ್, ಸ್ವೀಡನ್, ರಷ್ಯ ಮತ್ತು ಆಸ್ಟ್ರಿಯ ರಾಜ್ಯಗಳು ಈ ಒಕ್ಕೂಟಕ್ಕೆ ಸೇರಿದ್ದುವು. ಫ್ರೆಂಚರ ಬೆದರಿಕೆ ಅತಿಯಾಗಿದ್ದರೂ ಪ್ರಷ್ಯ ಯಾವ ಬಣವನ್ನೂ ಸೇರದೆ ತಟಸ್ಥ ನಿಲುವು ತಳೆಯಿತು. ಫ್ರಾನ್ಸನ್ನು ಮೊದಲಿನ ಸ್ಥಿತಿಗೆ ಇಳಿಸುವುದು, ಅಂತರರಾಷ್ಟ್ರೀಯ ಪ್ರಶ್ನೆಗಳನ್ನು ಇತ್ಯರ್ಥಪಡಿಸಲು ಒಂದು ಶೃಂಗಸಭೆಯನ್ನು ಸೇರಿಸುವುದು ಮತ್ತು ಯೂರೋಪಿನಲ್ಲಿ ಶಾಶ್ವತ ಶಾಂತಿ ನೆಲೆಗೊಳ್ಳುವಂತೆ ಒಂದು ಒಕ್ಕೂಟವನ್ನು ರಚಿಸುವುದು ಮಿತ್ರರಾಷ್ಟ್ರಗಳ ಧ್ಯೇಯಗಳಾಗಿದ್ದವು. ಇಂಗ್ಲೆಂಡನ್ನು ಸೋಲಿಸಿದರೆ ಅದರ ಮಿತ್ರರಾಜ್ಯಗಳನ್ನು ಸೋಲಿಸುವುದು ಸುಲಭವೆಂದು ನೆಪೋಲಿಯನ್ ಭಾವಿಸಿದ. ಅಮೆರಿಕದ ಇಂಗ್ಲಿಷ್ ವಸಾಹತುಗಳು ಫ್ರೆಂಚರ ಸಹಾಯದಿಂದ ಜಾರ್ಜನ ಅಧಿಕಾರವನ್ನು ಕಿತ್ತೊಗೆದದ್ದರಿಂದ ಜಾರ್ಜನ ನಿರಂಕುಶ ಆಳ್ವಿಕೆಗೆ ಒಳಗಾಗಿದ್ದ ಇಂಗ್ಲಿಷ್ ಜನತೆಯೂ ಅವನ ಅಧಿಕಾರವನ್ನು ಕಿತ್ತೊಗೆಯಲು ಹವಣಿಸುತ್ತಿದೆಯೆಂದು ನೆಪೋಲಿಯನ್ ತಪ್ಪಾಗಿ ಅರ್ಥಮಾಡಿಕೊಂಡ. ಇಂಗ್ಲಿಷರಲ್ಲಿ ಒಗ್ಗಟ್ಟು ಇದೆಯೆಂದೂ ಕೈಗಾರಿಕಾ ಕ್ರಾಂತಿ ಅವರಿಗೆ ಹೊಸ ಚೈತನ್ಯವನ್ನು ತಂದು ಕೊಟ್ಟಿದೆಯೆಂದೂ ಅವನು ತಿಳಿಯಲೇ ಇಲ್ಲ.  

  	ಟ್ರಿಫಾಲ್ಗರ್ ಕದನ : ಇಂಗ್ಲೆಂಡಿನ ಮೇಲೆ ದಾಳಿ ಮಾಡಲು ನೆಪೋಲಿಯನ್ ಸಕಲ ಏರ್ಪಾಟುಗಳನ್ನು ಮಾಡಿದ. ತನ್ನ ನೌಕಾಪಡೆಯನ್ನು ಟೂಲಾನ್ ರಾಷ್‍ಪೋರ್ಟ್ ಮತ್ತು ಬ್ರೆಸ್ಟ್ ರೇವುಪಟ್ಟಣಗಳಲ್ಲಿರಿಸಿದ. ಶತ್ರುನೌಕೆಗಳೂ ಹೊರಗೆ ಹೋಗದಂತೆ ನೆಲ್ಸನ್ನನ ನೇತೃತ್ವದಲ್ಲಿ ಇಂಗ್ಲಿಷ್ ನೌಕಾಪಡೆ ಕಾಯುತ್ತಿತ್ತು. ಫ್ರೆಂಚ್ ನೌಕಾಪಡೆಗಳು ಇಂಗ್ಲಿಷರ ಕಣ್ಣಿಗೆ ಬೀಳದಂತೆ ತಪ್ಪಿಸಿಕೊಂಡು ಹೋಗಿ ವೆಸ್ಟ್ ಇಂಡೀಸ್ ದ್ವೀಪಗಳಲ್ಲಿ ಒಂದು ಕಡೆ ಗುಟ್ಟಾಗಿ ಸೇರಿ ಇಂಗ್ಲಿಷ್ ಕಡಲ್ಗಾಲುವೆಯ ಮೇಲೆ ನುಗ್ಗಬೇಕೆಂದು ಗೊತ್ತಾಗಿತ್ತು. ಫ್ರೆಂಚರಿಗೆ ಬೆಂಬಲವಾಗಿ ಸ್ಪೇನಿನವರು ತಮ್ಮ ನೌಕಾಪಡೆಯೊಂದಿಗೆ ಬಂದು ಸೇರಿದರು. ಫ್ರೆಂಚ್ ನೌಕಾಧಿಪತಿಯಾದ ವೀಲ್ನೂವ್ ಮೊದಲಿನ ಯೋಜನೆಯಂತೆ ತನ್ನ ನೌಕಾಪಡೆಯೊಂದಿಗೆ ನೆಲ್ಸನ್ನನ ಕಣ್ಣಿಗೆ ಬೀಳದಂತೆ ಟೂಲಾನಿನಿಂದ ಅದೃಶ್ಯವಾದ. ಅವನು ವೆಸ್ಟ್ ಇಂಡೀಸ್ ಕಡೆ ಹೋಗಿರಬಹುದೆಂದು ನೆಲ್ಸನ್ ಊಹಿಸಿ ಅವನನ್ನು ಹಿಂಬಾಲಿಸಿದ. ಅಷ್ಟರಲ್ಲಿ ವೀಲ್ನೂವಿನ ಇಂಗಿತ ಇಂಗ್ಲೆಂಡಿಗೆ ತಿಳಿಯಿತು. ಅದು ಕಾಲ್ಡರ್ ಎಂಬ ನೌಕಾ ದಳಪತಿಯ ಸಹಾಯಕ್ಕಾಗಿ ಹದಿನೈದು ಹಡಗುಗಳನ್ನು ಕಳುಹಿಸಿಕೊಟ್ಟಿತು. 1805ರ ಜುಲೈ ತಿಂಗಳಲ್ಲಿ ಕಾಲ್ಡರನಿಗೂ ವೀಲ್ನೂವ್‍ಗೂ ನೌಕಾಯುದ್ಧ ನಡೆಯಿತು. ಈ ಯುದ್ಧದಲ್ಲಿ ನೆಪೋಲಿಯನ್ನನ ಪ್ರಯತ್ನ ವಿಫಲವಾಯಿತು. ಆದರೆ ಅವನು ತನ್ನ ಹಟ ಬಿಡಲಿಲ್ಲ. 1805ರ ಅಕ್ಟೋಬರ್‍ನಲ್ಲಿ ಉಭಯ ಪಕ್ಷಗಳಿಗೂ ಟ್ರಫಾಲ್ಗರ್ ಬಳಿ ಭೀಕರ ಕದನ ನಡೆಯಿತು. ನೆಲ್ಸನ್ ಮತ್ತು ಕಾಲಿಂಗ್‍ವುಡ್ ಇಬ್ಬರೂ ಸೇರಿ ಸ್ಪೇನ್ ಮತ್ತು ಫ್ರಾನ್ಸಿನ ನೌಕಾಪಡೆಯನ್ನು ನಾಶಮಾಡಿದರು. ಆದರೆ ನೆಲ್ಸನ್ ಮೃತಿ ಹೊಂದಿದ. ನೆಲ್ಸನ್ನನ ಪ್ರತಿಭೆ, ಬ್ರಿಟಿಷ್ ನೌಕಾಪಡೆಯ ಸಾಮಥ್ರ್ಯ ಮತ್ತು ಸುವ್ಯವಸ್ಥೆ, ನೌಕಾಧಿಕಾರಿಗಳ ದಿಟ್ಟ ಕ್ರಮ-ಇವು ಇಂಗ್ಲಿಷರ ವಿಜಯಕ್ಕೆ ಕಾರಣ.

  	ಉಲ್ಮ್ ಮತ್ತು ಆಸ್ಟರ್‍ಲಿಟ್ಸ್ ಕದನಗಳು : ಇಂಗ್ಲೆಂಡಿನೊಂದಿಗೆ ಯುದ್ಧದ ಗೋಜಿಗೆ ಹೋಗದೆ ನೆಪೋಲಿಯನ್ ತನ್ನ ಸೈನ್ಯವನ್ನು ಆಸ್ಟ್ರಿಯದತ್ತ ಹೋಗುವಂತೆ ಆಜ್ಞೆ ಮಾಡಿದ. ಆಸ್ಟ್ರಿಯನ್ ಉಲ್ಮ್ ಕದನದಲ್ಲಿ ಸೋತಿತು. ಅದರ ದಂಡನಾಯಕ 1805ರ ಅಕ್ಟೋಬರಲ್ಲಿ ಫ್ರೆಂಚರಿಗೆ ಶರಣಾಗತನಾದ. ಇದರಿಂದ ವಿಯೆನ್ನದ ಮೇಲೆ ನುಗ್ಗಲು ದಾರಿ ತೆರೆದಂತಾಯಿತು. ಆಸ್ಟ್ರೊ-ರಷ್ಯನ್ ಸೈನ್ಯಗಳೂ ಆಸ್ಟರ್‍ಲಿಟ್ಸ್‍ನಲ್ಲಿ ಬಂದು ಸೇರಿದವು. 1805ರ ಡಿಸೆಂಬರಿನಲ್ಲಿ ರಷ್ಯ ಮತ್ತು ಆಸ್ಟ್ರಿಯ ಸೈನ್ಯಗಳು ಫ್ರೆಂಚರಿಗೆ ಸೋತು ಹಿಮ್ಮೆಟ್ಟಿದವು. ಇವು ನೆಪೋಲಿಯನ್ನನ ಅದ್ಭುತ ದಿಗ್ವಿಜಯಗಳಾಗಿದ್ದವು. ಅವನು ನೌಕಾಯುದ್ಧದಲ್ಲಿ ಕಳೆದುಕೊಂಡಿದ್ದನ್ನು ಭೂಯುದ್ದದಲ್ಲಿ ಪಡೆದ. 1805ರ ಡಿಸೆಂಬರ್ 26ರಂದು ಪ್ರೆಸ್‍ಬರ್ಗ್ ಕೌಲಾಯಿತು. ಇದರ ಪ್ರಕಾರ ಆಸ್ಟ್ರಿಯ ಮಿತ್ರರಾಷ್ಟ್ರಗಳ ಒಕ್ಕೂಟವನ್ನು ತ್ಯಜಿಸಿ, ಕೆಲವು ಪ್ರದೇಶಗಳನ್ನು ಫ್ರಾನ್ಸಿಗೆ ಬಿಟ್ಟುಕೊಟ್ಟಿತು. ರಷ್ಯನರು ಸಂಧಿಮಾಡಿಕೊಳ್ಳದೆ ಅಗಾಧ ಸೋಲನ್ನನುಭವಿಸಿ ತಮ್ಮ ದೇಶಕ್ಕೆ ವಾಪಸಾದರು.
 
 	1806ರ ಜುಲೈ 12ರಂದು ನೆಪೋಲಿಯನ್ ರೈನ್ ರಾಜ್ಯಗಳ ಸಂಘವನ್ನು ಸ್ಥಾಪಿಸಿದ. ಜರ್ಮನಿಯ ಪ್ರದೇಶಗಳನ್ನು ಮೂರು ಭಾಗಗಳಾಗಿ ವಿಂಗಡಿಸುವ ಯೋಜನೆಯನ್ನು ಹಾಕಿಕೊಳ್ಳಲಾಯಿತು. ಹೊಸದಾಗಿ ಸ್ಥಾಪನೆಯಾದ ಒಕ್ಕೂಟದಲ್ಲಿ ಹದಿನಾರು ಸಂಸ್ಥಾನಗಳಿದ್ದವು. ಈ ಒಕ್ಕೂಟಕ್ಕೆ ಸಂಬಂಧಪಟ್ಟ ವಿಷಯಗಳನ್ನು ಚರ್ಚಿಸಲು ಒಂದು ಡಯಟ್ ಸಂಸ್ಥೆಯಿರಬೇಕೆಂದೂ ಅದು ಫ್ರಾಂಕ್‍ಫರ್ಟಿನಲ್ಲಿ ತನ್ನ ಅಧಿವೇಶನವನ್ನು ಆರಂಭಿಸಬೇಕೆಂದೂ ವ್ಯವಸ್ಥೆ ಮಾಡಲಾಯಿತು. ಪ್ರತಿಯೊಂದು ಸದಸ್ಯರಾಷ್ಟ್ರವೂ ನೆಪೋಲಿಯನ್ನನಿಗೆ ಸೈನ್ಯಸಹಾಯ ಮಾಡಬೇಕಾಗಿತ್ತು. ಜರ್ಮನಿಯಲ್ಲಿ ಶಾಂತಿಸೌಹಾರ್ದ ನೆಲಸುವಂತೆ ಏರ್ಪಾಡು ಮಾಡಲು ತಾನು ಸಂಸ್ಥಾನಗಳ ಒಕ್ಕೂಟದ ರಕ್ಷಕನ ಪಾತ್ರ ವಹಿಸುವುದಾಗಿ ನೆಪೋಲಿಯನ್ ಘೋಷಿಸಿದ. ಪವಿತ್ರ ರೋಮನ್ ಚಕ್ರಾಧಿಪತ್ಯವನ್ನು ಯೂರೋಪಿನ ಇತಿಹಾಸ ಪುಟದಿಂದ ಅಳಿಸಿ ಆಸ್ಟ್ರಿಯನ್ ಚಕ್ರವರ್ತಿಗಳು ಅದರ ಮೇಲೆ ಹೊಂದಿದ್ದ ಅಧಿಕಾರವನ್ನು ಅವನು ಕೊನೆಗೊಳಿಸಿದ.

  	ಪ್ರಷ್ಯ ಮತ್ತು ರಷ್ಯ : ಬದಲಾಗುತ್ತಿದ್ದ ಸನ್ನಿವೇಷದಲ್ಲಿ ಪ್ರಷ್ಯ ತನ್ನ ತಟಸ್ಥ ನೀತಿಯನ್ನು ವಿಮರ್ಶಿಸಬೇಕಾಯಿತು. ಪ್ರಷ್ಯದ ಎಲ್ಲಾ ರಾಜಕೀಯ ಪಕ್ಷಗಳು ಇದರ ವಿಷಯವಾಗಿ ತಮ್ಮ ಭಿನ್ನಮತವನ್ನು ವ್ಯಕ್ತಪಡಿಸಿದುವು. ರಾಣಿಯ ಬೆಂಬಲ ಪಡೆದ ರಾಷ್ಟ್ರವೀರರು ವಿದೇಶಾಂಗ ಮಂತ್ರಿ ಮತ್ತು ದಂಡನಾಯಕ ಬ್ಲೂಚರ್ ಫ್ರಾನ್ಸಿನ ಮೇಲೆ ಯುದ್ದ ಘೋಷಿಸಬೇಕೆಂದು ಸರ್ಕಾರವನ್ನು ಒತ್ತಾಯಪಡಿಸಿದರು. ಆದರೆ ಶಾಂತಿಪ್ರಿಯನಾದ ರಾಜನಿಗೆ ಇದು ಇಷ್ಟವಿರಲಿಲ್ಲ. ಫ್ರೆಂಚ್ ಸೈನಿಕರು ಪ್ರಷ್ಯದ ಗಡಿ ಉಲ್ಲಂಘನೆ ಮಾಡಿದರಿಂದ ಸಮರವಾದಿ ಪಕ್ಷದ ಮಾತಿಗೆ ಬಲ ದೊರೆಯಿತು. ಫ್ರೆಂಚ್ ಸೈನ್ಯವನ್ನು ತತ್‍ಕ್ಷಣ ವಾಪಾಸು ಕರೆಯಿಸಿಕೊಳ್ಳುವಂತೆ ನೆಪೋಲಿಯನ್ನನಿಗೆ ಎಚ್ಚರಿಕೆ ಕೊಡಲಾಯಿತು. ಫ್ರಾನ್ಸಿನ ವಿರುದ್ದ ಯುದ್ದ ಘೋಷಿಸಲಾಯಿತು. ರಷ್ಯ ಮತ್ತು ಸ್ಯಾಕ್ಸನಿಗಳು ಪ್ರಷ್ಯದ ಸಹಾಯಕ್ಕೆ ಧಾವಿಸಿದುವು. ಆದರೆ ಈ ಮಿತ್ರ ರಾಜ್ಯಗಳ ಸೈನ್ಯಗಳು ಪೂರ್ಣವಾಗಿ ಸೋಲನ್ನು ಅನುಭವಿಸಿದುವು. ಪ್ರಷ್ಯ ಶತ್ರು ಸೈನ್ಯಗಳನ್ನು ಎದುರಿಸುವ ಯೋಜನೆಯನ್ನು ಕೈ ಬಿಟ್ಟಿತು. ಇದರಿಂದ ಫ್ರೆಂಚ್ ಸೈನಿಕರು ನೇರವಾಗಿ ಬರ್ಲಿನ್ ಪಟ್ಟಣಕ್ಕೆ ನುಗ್ಗಿದರು. ಅನೇಕ ಕೋಟೆ ಕೊತ್ತಲಗಳು, ಸಣ್ಣ ಪುಟ್ಟ ನಗರಗಳು ಅವರ ವಶವಾದುವು. ಲುಬೆಕ್ ಎಂಬಲ್ಲಿ ಬ್ಲೂಚರ್ ಶರಣಾಗಬೇಕಾಯಿತು. 1807ರ ಫೆಬ್ರವರಿಯಲ್ಲಿ ಪ್ರಷ್ಯನ್ನರು ಮತ್ತು ರಷ್ಯನ್ನರು ಐಲಾ ಎಂಬ ಸ್ಥಳದಲ್ಲಿ ಶತ್ರು ಸೈನ್ಯವನ್ನು ಪ್ರತಿಭಟಿಸಿ ವೀರಾವೇಶದಿಂದ ಕಾದಾಡಿದರು. ಆದರೆ ಅದೊಂದು ಅನಿಶ್ಚಿತ ಯುದ್ಧವಾಯಿತು. 1807ರ ಜೂನ್‍ನಲ್ಲಿ ಫ್ರೀಡ್‍ಲ್ಯಾಂಡ್ ರಂಗದಲ್ಲಿ ನಡೆದ ಯುದ್ಧ ರಷ್ಯನ್ನರಿಗೆ ದೊಡ್ಡ ಆಘಾತವಾಗಿ ಪರಿಣಮಿಸಿತು. ರಷ್ಯದ ಜಾರ್ 1 ನೆಯ ಅಲೆಗ್ಸಾಂಡರ್ ನೆಪೋಲಿಯನ್ನನೊಡನೆ ಒಪ್ಪಂದ ಮಾಡಿಕೊಂಡ. ನೆಪೋಲಿಯನ್ನನ ಈ ವಿಜಯದಿಂದ ಮಿತ್ರ ರಾಷ್ಟ್ರಗಳ ತೃತೀಯ ಒಕ್ಕೂಟ ಮುರಿದುಹೋಯಿತು. ಯೂರೋಪಿನ ಬಲಿಷ್ಠ ರಾಷ್ಟ್ರಗಳಾದ ಪ್ರಷ್ಯ, ಆಸ್ಟ್ರಿಯ ಮತ್ತು ರಷ್ಯಗಳನ್ನು ಸೋಲಿಸಿ ಅವುಗಳ ಭವಿಷ್ಯವನ್ನು ನಿರ್ಣಯಿಸುವ ಶಕ್ತಿ ನೆಪೋಲಿಯನ್ನನಿಗೆ ಪ್ರಾಪ್ತವಾಯಿತು. ನೆಪೋಲಿಯನ್ ಯೂರೋಪಿನ ಬಹುಭಾಗಕ್ಕೆ ಚಕ್ರವರ್ತಿಯಾಗಿದ್ದ.

	ಖಂಡಾಂತರ ಪದ್ಧತಿ : 1805-1808ರ ಅವಧಿಯಲ್ಲಿ ಅವನ ಅಧಿಕಾರ ಉತ್ತುಂಗಶಿಖರ ಮುಟ್ಟಿತ್ತು. ತರುವಾಯ ಅವನ ಅವನತಿ ಪ್ರಾರಂಭವಾಯಿತು. ನೆಪೋಲಿಯನ್ ಭೂಯುದ್ಧದಲ್ಲಿ ಅಜೇಯನಾಗಿದ್ದರೂ ನೌಕಾಯುದ್ಧದಲ್ಲಿ ಅವನು ದುರ್ಬಲನಾಗಿದ್ದ. ಅವನ ನೌಕಾಪಡೆ ಇಂಗ್ಲೆಂಡಿನದಕ್ಕೆ ಸಾಟಿಯಾಗಿರಲಿಲ್ಲ. ಆದ್ದರಿಂದ ನೆಪೋಲಿಯನ್ ಇಂಗ್ಲೆಂಡಿನ ಮೇಲೆ ನೇರವಾಗಿ ಆಕ್ರಮಣ ನಡೆಸುವ ಯೋಚನೆ ಬಿಟ್ಟು ಅದರ ಮೇಲೆ ಆರ್ಥಿಕ ಯುದ್ಧ ಆರಂಭಿಸಿದ. ಇಂಗ್ಲೆಂಡಿನ ಶಕ್ತಿ ಅದರ ವಾಣಿಜ್ಯವನ್ನು ಅವಲಂಬಿಸಿದೆಯೆಂದು ಚೆನ್ನಾಗಿ ಅರಿತಿದ್ದ ನೆಪೋಲಿಯನ್ ಅದರ ಆರ್ಥಿಕ ಶಕ್ತಿಯನ್ನು ಕುಗ್ಗಿಸಲು ನಿರ್ಧರಿಸಿದ.
  
ನೆಪೋಲಿಯನ್ ತನ್ನ ಅಧೀನದಲ್ಲಿದ್ದ ಯೂರೋಪಿಯನ್ ರಾಜ್ಯಗಳು ಇಂಗ್ಲೆಂಡಿನೊಂದಿಗೆ ವ್ಯಾಪಾರ ಮಾಡಕೂಡದೆಂದು 1806-1807ರಲ್ಲಿ ಆಜ್ಞೆಗಳನ್ನು ಹೊರಡಿಸಿ ಇಂಗ್ಲೆಂಡಿನ ಮೇಲೆ ಆರ್ಥಿಕ ದಿಗ್ಭಂದನ ಹಾಕಿದ. ಇದನ್ನು ಖಂಡಾಂತರ ಪದ್ಧತಿ ಎಂದು ಕರೆಯಲಾಗಿದೆ. ಈ ಆರ್ಥಿಕ ದಿಗ್ಬಂಧನದಿಂದ ಎರಡೂ ಕಡೆಯ ರಾಷ್ಟ್ರಗಳಿಗೂ ಕಷ್ಟ ನಷ್ಟಗಳುಂಟಾದವು. ಇದರಿಂದ ನೆಪೋಲಿಯನ್ನನಿಗೆ ಅಪಾರ ಹಾನಿ ಉಂಟಾಯಿತು. ಬ್ರಿಟನ್ನಿನಿಂದ ಯಾವ ಪದಾರ್ಥವನ್ನೂ ಆಮದು ಮಾಡಿಕೊಳ್ಳದಂತೆ ಯೂರೋಪಿನ ಉದ್ದವಾದ ತೀರಪ್ರದೇಶದ ಮೇಲೆ ಕಣ್ಣಿಟ್ಟು ಕಾಯುವುದು ಅವನಿಗೆ ಸಾಧ್ಯವಾಗದ ಕೆಲಸವಾಗಿತ್ತು. ಫ್ರೆಂಚ್ ನೌಕಾಪಡೆ ಇದಕ್ಕೆ ಅಸಮರ್ಥವಾಗಿತ್ತು. ಈ ಆರ್ಥಿಕ ದಿಗ್ಬಂಧನವನ್ನು ತನ್ನ ಅಧೀನದಲ್ಲಿದ್ದ ಎಲ್ಲ ರಾಜ್ಯಗಳಲ್ಲೂ ಜಾರಿಗೆ ತರುವುದು ಕಷ್ಟವೆಂದು ಕೆಲವು ದಿವಸಗಳಲ್ಲಿಯೇ ಅವನು ಮನಗಂಡ. ಇಂಗ್ಲೆಂಡಿನಿಂದ ಸರಕುಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಿದ್ದರಿಂದ ಪಶ್ಚಿಮ ಯೂರೋಪಿನಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು ಉಂಟಾಯಿತು. ಇದರಿಂದ ಜನರಿಗೆ ಆವಶ್ಯಕ ವಸ್ತುಗಳ ಕೊರತೆ ಉಂಟಾಗಿ ಅವರು ತೊಂದರೆಗೀಡಾದರು. ಇದಕ್ಕೆಲ್ಲ ನೆಪೋಲಿಯನ್ನನೇ ಕಾರಣವೆಂದು ಭಾವಿಸಿದರು. ನೆಪೋಲಿಯನ್ನನ ಈ ಯೋಜನೆ ಅನೇಕ ರಾಜಕೀಯ ಘರ್ಷಣೆಗಳಿಗೆ ಕಾರಣವಾಯಿತು. ಅವನ ಈ ಕ್ರಮಗಳಿಂದಾಗಿ ಪೋಪನೊಡನೆ ಹೊಂದಿದ್ದ ಸಂಬಂಧ ಮುರಿದುಹೋಯಿತು. ನೆಪೋಲಿಯನ್ ಪೋಪನ ರಾಜ್ಯವನ್ನು ವಶಪಡಿಸಿಕೊಂಡ. ಇದರಿಂದ ಕ್ಯಾತೊಲಿಕರು ಅವನ ವಿರೋಧಿಗಳಾದರು. ಅವನ ಸಹೋದರ ಲೂಯಿ ಬೋನಾಪಾರ್ಟ್ ಖಂಡಾಂತರ ಪದ್ಧತಿಗೆ ಬೆಂಬಲ ಸೂಚಿಸಿದ ಕಾರಣದಿಂದ ನೆಪೋಲಿಯನ್ ಅವನನ್ನು ಸಿಂಹಾಸನದಿಂದ ಉರುಳಿಸಿ ಹಾಲೆಂಡನ್ನು ಫ್ರಾನ್ಸಿಗೆ ಸೇರಿಸಿಕೊಂಡ.

   	ಪರ್ಯಾಯದ್ವೀಪ ಯುದ್ಧ : ಪೋರ್ಚುಗಲ್ ಮತ್ತು ಸ್ಪೇನ್ ರಾಜ್ಯಗಳು ಖಂಡಾಂತರ ಪದ್ಧತಿಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿರಲಿಲ್ಲವಾದುದರಿಂದ ಅವನ್ನು ಶಿಕ್ಷಿಸಲು ನೆಪೋಲಿಯನ್ 1807ರಲ್ಲಿ ಆ ರಾಜ್ಯಗಳ ಮೇಲೆ ದಂಡೆತ್ತಿಹೋದ. ಪೋರ್ಚುಗಲ್ಲಿನ ದೊರೆ ಬ್ರೆಜಿಲ್‍ಗೆ ಓಡಿಹೋದ. ಸ್ಪೇನಿನ ದೊರೆಯನ್ನು ಪದಚ್ಯುತಗೊಳಿಸಿ ಅಲ್ಲಿಗೆ 1808ರಲ್ಲಿ ತನ್ನ ಹಿರಿಯ ಸೋದರ ಜೋಸೆಫ್ ಬೋನಪಾರ್ಟನನ್ನು ರಾಜನಾಗಿ ನೆಪೋಲಿಯನ್ ನೇಮಿಸಿದ. ಆದರೆ ಸ್ಪ್ಯಾನಿಷರು ಫ್ರೆಂಚರ ಅಧಿಕಾರವನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಆದ್ದರಿಂದ ಸ್ಪೇನ್ ಮತ್ತು ಪೋರ್ಚುಗಲ್ ಜನರು ಇಂಗ್ಲೆಂಡಿನಿಂದ ಸೈನ್ಯ ಮತ್ತು ಹಣಕಾಸಿನ ಸಹಾಯಪಡೆದು ದಂಗೆಯೆದ್ದರು. ಹೀಗೆ ಪರ್ಯಾಯ ದ್ವೀಪ ಯುದ್ಧ ಆರಂಭವಾಗಿ ಅದು ಕೊನೆಗೆ ರಾಷ್ಟ್ರೀಯ ಹೋರಾಟವಾಗಿ ಮುಂದುವರಿಯಿತು. ಫ್ರೆಂಚರು ಅನೇಕ ಕಾರಣಗಳಿಂದಾಗಿ ಹಲವು ಬಾರಿ ಸೋಲನ್ನು ಅನುಭವಿಸಿದರು. 1812ರಲ್ಲಿ ಇಂಗ್ಲಿಷರ ದಂಡಯನಾಯಕನಾದ ಡ್ಯೂಕ್ ಆಪ್ ವೆಲಿಂಗ್ಟನ್ ಸ್ಪೇನಿನ ರಾಜಧಾನಿಯಾದ ಮ್ಯಾಡ್ರಿಡನ್ನು ಹಿಡಿದುಕೊಂಡು ಜೋಸೆಫ್ ಬೋನಪಾರ್ಟನನ್ನು ಅಲ್ಲಿಂದ ಓಡಿಸಿದ. ಭೂಯುದ್ಧದಲ್ಲಿ ಅದುವರೆಗೂ ಅಜೇಯವೆನಿಸಿಕೊಂಡಿದ್ದ ಫ್ರೆಂಚ್ ಸೈನ್ಯ ಪ್ರಥಮ ಬಾರಿಗೆ ಸ್ಪೇನ್ ಮತ್ತು ಪೋರ್ಚುಗಲ್‍ಗಳಲ್ಲಿ ತೀವ್ರ ಸೋಲನ್ನು ಅನುಭವಿಸಿತು. ನೆಪೋಲಿಯನ್ ಅದುವರೆಗೆ ಯೂರೋಪಿನ ನಿರಂಕುಶ ಪ್ರಭುಗಳ ಕೂಲಿಕಾರ ಸೈನ್ಯದ ವಿರುದ್ಧ ಹೋರಾಡಿದ್ದ. ಆದರೆ ಆಗ ಅವನು ರಾಷ್ಟ್ರಪ್ರೇಮದಿಂದ ಕೂಡಿದ, ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಸರ್ವವನ್ನೂ ತ್ಯಾಗಮಾಡಲು ಸಿದ್ಧವಿದ್ದ ಜನಗಳ ಜೊತೆ ಹೋರಾಡಬೇಕಾಯಿತು. ಸ್ಪೇನಿನವರು ಗೆರಿಲ್ಲಾ ಯುದ್ಧವನ್ನು ಆರಂಭಿಸಿ, ಫ್ರೆಂಚ್ ಸೈನ್ಯ ಸ್ಪೇನಿನಿಂದ ಕಾಲ್ತೆಗೆಯುವಂತೆ ಮಾಡಿದರು. ಈ ಯುದ್ಧದಿಂದಾಗಿ ನೆಪೋಲಿಯನ್ ತನ್ನ ಸೈನ್ಯದ ಬಹುಭಾಗವನ್ನು ಕಳೆದುಕೊಂಡ. ನೆಪೋಲಿಯನ್ನನಿಗೆ ಸ್ಪೇನ್ ಒಂದು ಹುಣ್ಣಾಗಿ ಪರಿಣಮಿಸಿತು.

  	ಆಸ್ಟ್ರಿಯದೊಡನೆ ಯುದ್ಧ : ಸ್ಪೇನಿನಲ್ಲಿ ಫ್ರೆಂಚರು ಅನುಭವಿಸಿದ ಸೋಲು ಆಸ್ಟ್ರಿಯನ್ನರಿಗೆ ಗೆಲುವಿನ ಉತ್ಸಾಹವನ್ನು ತಂದುಕೊಟ್ಟಿತು. ನೆಪೋಲಿಯನ್ ಅವರನ್ನು ಸದೆಬಡಿಯಲು ಹೊರಟ. ಬವೇರಿಯದಲ್ಲಿ ಆಸ್ಟ್ರಿಯನರನ್ನು ಸೋಲಿಸಿದ. ಆದರೆ ಆಸ್ಪರ್ನ್‍ನಲ್ಲಿ ನಡೆದ ಕದನದಲ್ಲಿ (1809) ಹಿಮ್ಮೆಟ್ಟಬೇಕಾಯಿತು. ಅವನ ಸೋಲು ಇಡೀ ಯೂರೋಪಿನಲ್ಲೇ ಕಾಳ್ಗಿಚ್ಚಿನಂತೆ ಹರಡಿತು. ಆದರೆ ವ್ಯಾಗ್ರಾಂ ಕದನದಲ್ಲಿ (ಜುಲೈ 1809) ಅವರನ್ನು ನೆಪೋಲಿಯನ್ ಸೋಲಿಸಿದ. ಅವರ ಮೇಲಿದ್ದ ಸೇಡನ್ನು ತೀರಿಸಿಕೊಂಡು ವಿಯೆನ್ನ ಶಾಂತಿಕೌಲನ್ನು ಮಾಡಿಕೊಂಡ. ಕ್ರೋಷಿಯ, ಡಾಲ್ಮೇಷಿಯ ಮತ್ತು ಸ್ಲೊವೇನಿಯಗಳನ್ನು ಆಸ್ಟ್ರಿಯದಿಂದ ಕಸಿದುಕೊಂಡು ಅವನ್ನು ಸಂಘಟಿಸಿ ಒಂದು ಪ್ರಾಂತ್ಯ ನಿರ್ಮಿಸಿದ. ಆಸ್ಟ್ರಿಯನ್ ಸೈನ್ಯವನ್ನು ಮಿತಿಗೊಳಿಸಲಾಯಿತು. ನೆಪೋಲಿಯನ್ 1810ರಲ್ಲಿ ಆಸ್ಟ್ರಿಯನ್ ಚಕ್ರವರ್ತಿಯ ಮಗಳಾದ ಮೇರಿ ಲೂಯಿಯನ್ನು ಮದುವೆಯಾದ.

  	ರಷ್ಯದ ದಂಡಯಾತ್ರೆ (1812) : ಪರ್ಯಾಯದ್ವೀಪ ಯುದ್ಧ ನಡೆಯುತ್ತಿದ್ದಾಗಲೇ ನೆಪೋಲಿಯನ್ ರಷ್ಯದ ಮೇಲೆ ವಿನಾಶಕಾರಿ ದಂಡಯಾತ್ರೆ ಕೈಗೊಂಡ. ಅವನ ಖಂಡಾಂತರ ಪದ್ಧತಿ ಪ್ರಧಾನವಾಗಿ ರಷ್ಯದ ಮೈತ್ರಿಯನ್ನು ಅವಲಂಬಿಸಿತ್ತು. ಆದರೆ ನೆಪೊಲಿಯನ್ನನ ಆಜ್ಞೆಯನ್ನು ರಷ್ಯದ ಜಾóರ್ ಪಾಲಿಸಲು ಸಿದ್ಧನಿರಲಿಲ್ಲ. ಇದರಿಂದ ಅವರಿಬ್ಬರಿಗೂ ಮನಸ್ತಾಪ ಉಂಟಾಯಿತು. ವಿಜಯದಿಂದ ಉನ್ಮತ್ತನಾಗಿದ್ದ ನೆಪೋಲಿಯನ್ ಜಾರ್ ಅಲೆಗ್ಜಾಂಡರನನ್ನು ಶಿಕ್ಷಿಸಲು 1812ರಲ್ಲಿ ಆರು ಲಕ್ಷ ಜನರಿಂದ ಕೂಡಿದ ಬೃಹತ್ ಸೈನ್ಯದೊಂದಿಗೆ ರಷ್ಯದ ಮೇಲೆ ದಂಡಯಾತ್ರೆ ಕೈಗೊಂಡ. ಆದರೆ ರಷ್ಯದಲ್ಲಿ ವಿಜಯ ಗಳಿಸುವುದು ನೆಪೋಲಿಯನ್ ಊಹಿಸಿದಷ್ಟು ಸುಲಭವಾಗಿರಲಿಲ್ಲ. ಪ್ರವಾಹದಂತೆ ಉಕ್ಕಿಬರುತ್ತಿದ್ದ ಫ್ರೆಂಚ್ ಸೈನ್ಯವನ್ನು ರಷ್ಯದ ದಂಡನಾಯಕ ಪ್ರತಿಭಟಿಸಲೇ ಇಲ್ಲ. ಅದು ಮುನ್ನುಗ್ಗಿದಂತೆಲ್ಲ ಅವನು ರಷ್ಯದ ಮನೆಮಠಗಳಿಗೆ ಬೆಂಕಿ ಇಟ್ಟ. ಆಹಾರಧಾನ್ಯಗಳು ಅವರಿಗೆ ದೊರಕದಂತೆ ಮಾಡಿ, ಮಾರ್ಗವನ್ನು ತೆರವು ಮಾಡಿಕೊಟ್ಟು ಹಿಂದೆ ಹಿಂದೆ ಸರಿಯತೊಡಗಿದ. 1812ರ ಸೆಪ್ಟೆಂಬರಿನಲ್ಲಿ ರಷ್ಯನ್ ಸೈನಿಕರು ಬೊರೊಡಿನೋ ತೀರದಲ್ಲಿ ಬಂದು ಸೇರಿದರು. ಅಲ್ಲಿ ನಡೆದ ಭೀಕರ ಯುದ್ಧದಲ್ಲಿ ನೆಪೋಲಿಯನ್ ವಿಜಯ ಗಳಿಸಿದನಾದರೂ ಸುಮಾರು ನಲವತ್ತು ಸಾವಿರ ಸೈನಿಕರನ್ನು ಕಳೆದುಕೊಂಡ. ಈ ವಿಜಯದಿಂದ ಯಾವ ಅಡಚಣೆಯೂ ಇಲ್ಲದೆ ನೆಪೋಲಿಯನ್ ನೇರವಾಗಿ ಮಾಸ್ಕೋ ನಗರವನ್ನು ತಲುಪಿ, ಕ್ರೆಮ್ಲಿನ್ ಅರಮನೆಯಲ್ಲಿ ಇಳಿದುಕೊಂಡ. ಮಾಸ್ಕೋ ನಗರದಲ್ಲಿ ಜಾóರ್ ಚಕ್ರವರ್ತಿಯಾಗಲಿ ಯಾವ ಉನ್ನತ ಅಧಿಕಾರಿಗಳಾಗಲಿ ಅವನನ್ನು ಸ್ವಾಗತಿಸಲಿಲ್ಲ. ಆದರೆ ಅದಕ್ಕೆ ಬದಲಾಗಿ ನಿರ್ಜನವಾದ ಪಟ್ಟಣದಲ್ಲಿ ಬೆಂಕಿ ಕಾಣಿಸಿಕೊಂಡಿತು. ಸೈನಿಕರಿಗೆ ಮತ್ತು ಕುದುರೆಗಳಿಗೆ ಬೇಕಾಗಿದ್ದ ಆಹಾರವನ್ನೆಲ್ಲ ಬೆಂಕಿ ಭಕ್ಷಿಸಿತು. ಅಲ್ಲಿ ಬಹಳ ಕಾಲ ಇರುವುದು ಅಪಾಯವೆನಿಸಿತು. ನೆಪೋಲಿಯನ್ನಿನ ತೊಂದರೆಗಳು ದಿನೇ ದಿನೇ ಹೆಚ್ಚತೊಡಗಿದವು. ಆದರೆ ರಷ್ಯನ್ ಪ್ರಕೃತಿಯೂ ನೆಪೋಲಿಯನ್ನನಿಗೆ ಶತ್ರುವಿಗೆ ಪರಿಣಮಿಸಿತು. ಮೊದಲೇ ಆಹಾರದ ಅಭಾವದಿಂದ ಕಂಗೆಟ್ಟಿದ್ದ ಅವನ ಸೈನಿಕರು ಸಹಿಸಲು ಅಸಾಧ್ಯವಾದ ಚಳಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿದರು. ಕೊನೆಗೆ ಬೇರೆ ಮಾರ್ಗ ಹೊಳೆಯದೆ ಸ್ವದೇಶಕ್ಕೆ ಹಿಂದಿರುಗಲು ನೆಪೋಲಿಯನ್ ತನ್ನ ಸೈನ್ಯಕ್ಕೆ ಆಜ್ಞೆ ಮಾಡಿದ. ಕೊರೆಯುವ ಚಳಿಯಿಂದ ಮತ್ತು ರಷ್ಯನ್ನರು ಹಿಂದಿನಿಂದ ಮಾಡುತ್ತಿದ್ದ ದಾಳಿಗಳಿಂದ ಮಾರ್ಗಮಧ್ಯದಲ್ಲಿ ಅಸಂಖ್ಯಾತ ಸೈನಿಕರು ಮಡಿದರು. ನೆಪೋಲಿಯನ್ನನ ಸೈನ್ಯ ಹಿಮದಂತೆ ಕರಗಿಹೋಯಿತು. ಈ ರೀತಿಯಾಗಿ ನೆಪೋಲಿಂiÀiನ್ ರಷ್ಯದ ಮೇಲೆ ಕೈಗೊಂಡ ದಂಡಯಾತ್ರೆ ಅವನ ಸೈನ್ಯದ ವಿನಾಶದಲ್ಲಿ ಕೊನೆಗೊಂಡು ಮಹಾದಿಗ್ವಿಜಯಿಯಾಗಿದ್ದ ನೆಪೋಲಿಯನ್ನನ ಗೌರವಪ್ರತಿಷ್ಠೆಗಳು ನುಚ್ಚುನೂರಾದವು.

  	ಲೀಪ್ಸಿಗ್ ಕದನ : ನೆಪೋಲಿಯನ್ನನ ಅಸಹಾಯಕ ಪರಿಸ್ಥಿತಿಯನ್ನು ಅರಿತುಕೊಂಡು ರಷ್ಯ, ಪ್ರಷ್ಯ, ಇಂಗ್ಲೆಂಡ್, ಸ್ವೀಡನ್ ಮತ್ತು ಆಸ್ಟ್ರಿಯಗಳು ಒಟ್ಟಾಗಿ ಸೇರಿ ಅವನ ವಿರುದ್ಧ ವ್ಯೂಹ ರಚಿಸಿದವು. ನೆಪೋಲಿಯನ್ ಹೆಚ್ಚು ಸೈನಿಕರಿಗೂ ಹಣಕ್ಕೂ ಕೈಚಾಚಿದ. ಯುದ್ಧದ ಬಗ್ಗೆ ಹೆಚ್ಚಿನ ಆಸಕ್ತಿ ಇಲ್ಲದಿದ್ದರೂ ಐದು ಲಕ್ಷ ಸೈನಿಕರನ್ನು ಕಟ್ಟುವುದರಲ್ಲಿ ಯಶಸ್ವಿಯಾದ. ಮಿತ್ರರಾಷ್ಟ್ರಗಳು ಶಿಸ್ತಿನಿಂದಲೂ ಒಗ್ಗಟ್ಟಿನಿಂದಲೂ ಅವನ ಮೇಲೆ ಬಿದ್ದರು. ಅವರನ್ನು ಪ್ರತಿಭಟಿಸಲಾರದೆ ನೆಪೋಲಿಯನ್ ಲೀಪ್ಸಿಗ್‍ಗೆ ಬಂದ. ಮಿತ್ರರಾಷ್ಟ್ರಗಳ ಸೈನ್ಯ ಅವನನ್ನು ಹಿಂಬಾಲಿಸಿ ಬಂದು, ಅವನೊಡನೆ ನಾಲ್ಕು ದಿನಗಳ ಕಾಲ ಯುದ್ಧ ಮುಂದುವರಿಸಿ 1813ರ ಅಕ್ಟೋಬರಿನಲ್ಲಿ ಅವನನ್ನು ಸೋಲಿಸಿದವು. ಯೂರೋಪಿನ ರಾಷ್ಟ್ರಗಳು ಅಧಿಕಾರದ ನೊಗವನ್ನು ಕಿತ್ತೊಗೆದು ಒಟ್ಟಾಗಿ ನಿಂತುವು. ಡ್ಯೂಕ್ ಆಫ್ ವೆಲಿಂಗ್ಟನ್ ಸ್ಪೇನಿನಲ್ಲಿದ್ದ ಫ್ರೆಂಚ್ ಸೈನ್ಯವನ್ನು ಅನೇಕ ಯುದ್ಧಗಳಲ್ಲಿ ಸೋಲಿಸಿ ಅಲ್ಲಿಂದ ಓಡಿಸಿದ. ತಮ್ಮದು ಮೇಲುಗೈಯಾದ ಮೇಲೆ ಮಿತ್ರರಾಷ್ಟ್ರಗಳು ಗೌರವಯುತವಾದ ಶಾಂತಿಸಂಧಾನಕ್ಕೆ ಅವನನ್ನು ಆಹ್ವಾನಿಸಿದವು. ಆದರೆ ಅವನು ಅದನ್ನು ಒಪ್ಪಲಿಲ್ಲ. ನಾನೊಬ್ಬ ಅದೃಷ್ಟದ ಶಿಶು; ಈ ಕೆಲಸ ನಾನು ಮಾಡಲಾರೆ ಎಂದು ಹೇಳಿ, ಕೊನೆಯುಸಿರಿರುವವರೆಗೆ ಹೋರಾಡುವುದಾಗಿ ಸ್ಪಷ್ಟಪಡಿಸಿದ. ಮಿತ್ರರಾಷ್ಟ್ರಗಳು ಫ್ರಾನ್ಸಿನ ಮೇಲೆ ದಾಳಿಮಾಡಿ 1814ರಲ್ಲಿ ಪ್ಯಾರಿಸ್ ನಗರವನ್ನು ವಶಪಡಿಸಿಕೊಂಡವು. ನೆಪೋಲಿಯನ್ನನನ್ನು ಪದಚ್ಯುತಗೊಳಿಸಿ ಮೆಡಿಟರೇನಿಯನ್ ಸಮುದ್ರದ ಸಣ್ಣ ದ್ವೀಪವಾದ ಎಲ್ಬಕ್ಕೆ ಗಡಿಪಾರು ಮಾಡಲಾಯಿತು.

  	ಅಂತಿಮ ಘಟ್ಟ : ಇಷ್ಟಾದರೂ ನೆಪೋಲಿಯನ್ ಯುದ್ಧಗಳು ಕೊನೆಗೊಳ್ಳಲಿಲ್ಲ. ಎಲ್ಬದಲ್ಲಿ ಕೇವಲ ಹತ್ತು ತಿಂಗಳ ಕಾಲ ಇದ್ದು ಅವನು ಏಪ್ರಿಲ್ 1815ರಲ್ಲಿ ಅಲ್ಲಿಂದ ತಪ್ಪಿಸಿಕೊಂಡು ಫ್ರಾನ್ಸನ್ನು ತಲುಪಿದ. ಫ್ರಾನ್ಸಿನಲ್ಲಿ ಅವನಿಗೆ ಅದ್ಭುತ ಸ್ವಾಗತವೇ ದೊರೆಯಿತು. ಫ್ರಾನ್ಸಿನ ಜನತೆಗೆ ತಾನು ಶಾಸನಬದ್ಧವಾಗಿ ಆಳುವುದಾಗಿ ಭರವಸೆ ನೀಡಿ ಮತ್ತೊಮ್ಮೆ ಫ್ರಾನ್ಸಿನ ಚಕ್ರವರ್ತಿಯಾದ. ಫ್ರಾನ್ಸಿನ ಸಿಂಹಾಸನದಲ್ಲಿ ಕುಳಿತಿದ್ದ 18ನೆಯ ಲೂಯಿ ದೇಶ ಬಿಟ್ಟು ಓಡಿಹೋದ. ನೆಪೋಲಿಯನ್ನನ ಚಕ್ರವರ್ತಿ ಪದವಿ ಈ ಸಾರಿ ಕೇವಲ ನೂರು ದಿವಸಗಳಿಗೆ ಮಿತಿಗೊಂಡಿತು. ಅವನ ಪುನರ್ ಆಗಮನದಿಂದ ದಿಗ್ಭ್ರಾಂತನಾದ ಯೂರೋಪಿನ ರಾಜರು ಕಟ್ಟಕಡೆಯ ಪ್ರಯತ್ನವೆಂಬಂತೆ ತಮ್ಮ ಶಕ್ತಿಸಾಮಥ್ರ್ಯಗಳನ್ನು ಸಂಘಟಿಸಿ ನೆಪೋಲಿಯನ್ನನ ವಿರುದ್ಧ ಯುದ್ಧ ಘೋಷಿಸಿದರು. ನೆಪೋಲಿಯನ್ ಶಾಂತಿಸಂಧಾನಕ್ಕೆ ಸಿದ್ಧನಾಗಿದ್ದರೂ ಮಿತ್ರರಾಷ್ಟ್ರಗಳು ಅದಕ್ಕೆ ಒಪ್ಪಲಿಲ್ಲ. ಬೇರೆ ಮಾರ್ಗವಿಲ್ಲದೆ ಅವನು ರಣರಂಗಕ್ಕೆ ಇಳಿಯಬೇಕಾಯಿತು. ಇಂಗ್ಲೆಂಡ್ ಮತ್ತು ಪ್ರಷ್ಯಗಳ ಒಟ್ಟುಗೂಡಿದ ಸೈನ್ಯ ಡ್ಯೂಕ್ ಆಫ್ ವೆಲಿಂಗ್ಟನ್ ಮತ್ತು ಪ್ರಷ್ಯದ ದಂಡನಾಯಕ ಬ್ಲೂಚರನ ನೇತೃತ್ವದಲ್ಲಿ ಜೂನ್ 1815ರಲ್ಲಿ ಬೆಲ್ಜಿಯಮ್‍ನಲ್ಲಿ ನಡೆದ ವಾಟರ್ಲೂ ಕದನದಲ್ಲಿ ನೆಪೋಲಿಯನ್ನನನ್ನು ಸಂಪೂರ್ಣ ಆಗಿ ಸೋಲಿಸಿ ಸೆರೆಯಲ್ಲಿಟ್ಟಿತು. ಅದು ಅವನ ಅರವತ್ತನೆಯ ಯುದ್ಧವಾಗಿತ್ತು. ಆಸ್ಟರ್‍ಲಿಟ್ಸ್ ಕದನದಲ್ಲಿ ಅತ್ಯಂತ ಪ್ರಕಾಶಮಾನವಾಗಿ ಉದಯವಾದ ನಕ್ಷತ್ರ ವಾಟರ್ಲೂನಲ್ಲಿ ಅಸ್ತಮಯವಾಯಿತು.								(ಎಂ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ